ಬಾಲ ಸಂಗಣ್ಣ -
12ನೆಯ ಶತಮಾನದ ಒಬ್ಬ ವಚನಕಾರ. ಈತ ಬಸವಣ್ಣನ ಪತ್ನಿ ನೀಲಾಂಬಿಕೆಯ ಮಗನೆಂದು ಕೆಲವು ಪ್ರಾಚೀನ ಕಾವ್ಯ ಪುರಾಣಗಳಲ್ಲಿ ಹೇಳಿದೆ. ಈತನಿಗೆ ಬಾಲ ಸಂಗಯ್ಯ ಎಂಬ ಪರ್ಯಾಯನಾಮವೂ ಇದ್ದಂತೆ ತಿಳಿದುಬರುತ್ತದೆ ಈತ ಚಿಕ್ಕವಯಸ್ಸಿನಲ್ಲಿಯೇ ಕಾಲವಾದಂತೆ ಗಂಗಾಂಬಿಕೆಯ, ನೀಲಾಂಬಿಕೆಯ ಕೆಲವು ವಚನಗಳಿಂದ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರದಿಂದ ವ್ಯಕ್ತಪಡುತ್ತದೆ. ಬಾಲಸಂಗಣ್ಣ ನೀಲಾಂಬಿಕೆಯ ಮಗನಲ್ಲ, ಗಂಗಾಂಭಿಕೆಯ ಮಗ ಎಂಬ ಅಭಿಪ್ರಾಯ ಕೂಡ ಇದೆ. ಈ ವಾದಕ್ಕೆ ಮುಕ್ತ ಕಂಠಾಭರಣ ಎಂಬ ಕೃತಿಯಲ್ಲಿ ಬರುವ "ಗಂಗಾಂಬಿಕೆಯರು ತಮ್ಮ ಮೋಹದ ಪುತ್ರನಾದ ಬಾಲಸಂಗಯ್ಯನನ್ನು ಬಗಲಲಿ ಕುಳ್ಳಿರಿಸಿಕೊಂಡು" ಎಂಬ ಮಾತುಗಳು ಪುಷ್ಟಿನೀಡುತ್ತವೆ. ಸದ್ಯದಲ್ಲಿ ಈತನ ಆರು ವಚನಗಳು ಪ್ರಾಪ್ತವಾಗಿವೆ. ಕಮಠೇಶ್ವರಲಿಂಗ ಎಂಬುದು ಇವನ ವಚನಗಳ ಅಂಕಿತ. ಈ ಅಂಕಿತದ ಬಗೆಗೂ ಭಿನ್ನಾಭಿಪ್ರಾಯಗಳಿವೆ. ಇವನ ಒಂದು ವಚನ ಹೀಗಿದೆ :
ಕಾಬುದು ಜೀವನಲ್ಲ ಕಾಣಿಸಿಕೊಂಬುದು ಪರಮನಲ್ಲ
ಅಟ್ಟಿಮುಟ್ಟಿ ಹರಿದಾಡುವುವು ಕರಣಂಗಳಲ್ಲ
ಸುಖವನನುಭವಿಸುವವು ಇಂದ್ರಿಯಂಗಳಲ್ಲ
ಇಂತೀ ಭೇದಂಗಳಲ್ಲಿ ಆರೆಂಬುದು ತಿಳಿದು
ಸಸಿವೃಕ್ಷಕ್ಕೆ ನೀರನೆರದಡೆ ಆ ನೀರ ಕುಡಿವುದು ಬೇರೋ ಮರವೋ
ಮೀರಿ ಬೆಳೆದ ಫಲವೋ ಎಂಬುದನರಿದು ತಿಳಿದಲ್ಲಿ
ಅರಿದರುಹಿಸಿಕೊಂಬ ನಿರಿಗೆಯ ಬಲ್ಲ
ಆತ ಕಮಠೇಶ್ವರಲಿಂಗವನೊಡಗೂಡಿದ ಶರಣಾ
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ